ದಾಯಭಾಗ
	ಹಿಂದೂ ಕುಂಟುಬಕ್ಕೆ ಸಂಬಂಧಿಸಿದ ನ್ಯಾಯ ಪದ್ಧತಿಗಳ ಪೈಕಿ ಒಂದು. ಬಂಗಾಳಿ ಮಾತನಾಡುವ ಪ್ರದೇಶಗಳಲ್ಲಿ ಉಚ್ಚ ವಿಧಾಯಕ ಶಕ್ತಿಯುಳ್ಳದ್ದಾಗಿ ಅತ್ಯಂತ ಮನ್ನಣೆ ಪಡೆದಿದೆ. ಸು. 12ನೆಯ ಶತಮಾನದಲ್ಲಿ ಬಂಗಾಲದ ದೊರೆಯೊಬ್ಬನ ಆಸ್ಥಾನದಲ್ಲಿದ್ದನೆನ್ನಲಾದ ಜೀಮೂತ ವಾಹನನ ಧರ್ಮರತ್ನ ಎಂಬ ಗ್ರಂಥದ ಒಂದು ಭಾಗ ಎಂದು ಪರಿಗಣಿಸಲಾದ ದಾಯಭಾಗ ಉತ್ತರಾಧಿಕಾರ ಮತ್ತು ಸ್ವತ್ತಿನ ವಿಭಜನೆಗಳಿಗೆ ಸಂಬಂಧಪಟ್ಟ ವಿಧಿಗಳ ಒಂದು ವ್ಯಾಖ್ಯಾನ. ಜೀಮೂತವಾಹನನ ಕಲಾವಿವೇಕ ಮತ್ತು ವ್ಯವಹಾರಮಾಂತ್ರಿಕ ಎಂಬ ಕೃತಿಗಳೂ ಈ ಗ್ರಂಥದ ಭಾಗಗಳೆಂದು ನಂಬಲಾಗಿದೆ.

ದಾಯಭಾಗ ಪದ್ಧತಿ ಬಂಗಾಳದಲ್ಲಿ ಯಾವ ಕಾಲದಿಂದ ನೈರ್ಬಂಧಿಕ ಅಧಿಕಾರವುಳ್ಳದ್ದಾಯಿತೆಂಬುದನ್ನು ನಿರ್ದಿಷ್ಟವಾಗಿ ಹೇಳುವುದು ಕಷ್ಟ. ಅದರೆ ಸಂಯುಕ್ತ ಕುಂಟುಂಬವನ್ನು ಕುರಿತಂತೆ ಮಿತಾಕ್ಷರ ನ್ಯಾಯಪದ್ಧತಿಗಿಂತ ಇದು ಭಿನ್ನವಾದ್ದು. ಮಿತಾಕ್ಷರ ಪದ್ಧತಿಯಲ್ಲಿ ಸಂಯಕ್ತ ಕುಟುಂಬದ ಪ್ರತಿಯೊಬ್ಬ ಪುರುಷ ಸದಸ್ಯನೂ ಹುಟ್ಟಿನಿಂದಲೇ ಅದರ ಸ್ವತ್ತಿನ ಭಾಗಿದಾರನಾಗುತ್ತಾನೆ. ಅದರೆ ದಾಯಭಾಗದಲ್ಲಿ ಪಿತ್ರಾರ್ಜಿತ ಸ್ವತ್ತಿನ ಧಾರಕನ ಮಗ, ಮೊಮ್ಮಗ, ಮತ್ತು ಮರಿಮಕ್ಕಳಿಗೆ ಜನ್ಮತಃ ಈ ಹಕ್ಕು ಪ್ರಾಪ್ತವಾಗುವುದಿಲ್ಲ. ಸ್ವತ್ತಿನ ಧಾರಕ ತನ್ನ ಜೀವಿತಕಾಲದಲ್ಲಿ ಅದನ್ನು ವರ್ಗಾಯಿಸಬಹುದು. ಅದನ್ನು ಕೊಡುಗೆಯಾಗಿ ನೀಡಬಹುದು. ಅಥವಾ ಅದರ ಬಗ್ಗೆ ಉಯಿಲು ಮಾಡಬಹುದು. ಅವನ ಮಕ್ಕಳು ಮೊಮ್ಮಕ್ಕಳು ಮುಂತಾದವರು ಅದಕ್ಕೆ ಆಕ್ಷೇಪ ಮಾಡುವ ಹಾಗಿಲ್ಲ. ಸ್ವತ್ತಿನ ಪಾಲಾಗಬೇಕೆಂದು ಕೇಳುವಂತಿಲ್ಲ. ಸ್ವತ್ತಿನ ಧಾರಕನಾದವನು ಸಂತಾನವಿಲ್ಲದೆ ತೀರಿಕೊಂಡಾಗ ಅವನ ಸ್ವತ್ತಿಗೆ ಅವನ ವಿಧವೆ ಉತ್ತರಾಧಿಕಾರಿಣಿಯಾಗುತ್ತಾಳೆಯೇ ಹೊರತು ಅವನ ಸೋದರರೇ ಮುಂತಾದ ಕುಟುಂಬದ ಇತರ ಪುರುಷ ಸದಸ್ಯರಲ್ಲ.
(ಎಚ್.ಕೆ.ಎನ್.ಎ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ